ತೆಲುಗು ಛಂದಸ್ಸು

ಕನ್ನಡದಲ್ಲಿರುವಂತೆ ತೆಲುಗಿನಲ್ಲೂ ಸಂಸ್ಕøತದಿಂದ ಬಂದಿರುವ ಅಕ್ಷರಗಳ ಗಣಗಳು, ವೃತ್ತಗಳು ಉಂಟು. ಜೊತೆಗೆ ಸಂಸ್ಕøತದಲ್ಲಿ ಇಲ್ಲದಿರುವ ಅಕ್ಕರ ಮುಂತಾದ ಪ್ರಕಾರಗಳೂ ಸೀಸಪದ್ಯ. ಗೀತಪದ್ಯ, ದ್ವಿಪದಿ ಮುಂತಾದ ದೇಶೀಯ ಛಂದಸ್ಸುಗಳೂ ಉಂಟು. ಸೀಸಪದ್ಯ ತೆಲುಗರಿಗೆ ತುಂಬ ಅಭಿಮಾನದ ಛಂದಸ್ಸು, ಶ್ರೀನಾಥಕವಿಗೆ ಬಹಳ ಪ್ರಿಯವಾದದ್ದು. ಕನ್ನಡದಲ್ಲಿ ಯತಿ ಅರ್ಥಾನುವರ್ತಿ; ಅದರ ಪ್ರಾಸವುಂಟು. ತೆಲುಗಿನಲ್ಲಿ ಯತಿ ಪ್ರಾಸಗಳೆರಡೂ ಇವೆ. ತಮಿಳಿನಲ್ಲಿ ಸಹ ಯತಿಪ್ರಾಸಗಳುಂಟು. ಅಕ್ಕರ ಎಂಬ ಛಂಧಸ್ಸು ಕನ್ನಡ ಸಂಪ್ರದಾಯದಿಂದ ತೆಲುಗಿಗೆ ಬಂದಿದೆ.

ಕನ್ನಡ	ತೆಲುಗು
ಪಿರಿಯಕ್ಕರ 	ಮಹಾಕ್ಕರ
ದೊರೆಯಕ್ಕರ 	ಮಧ್ಯಾಕ್ಕರ
ನಡುವಣಕ್ಕರ	ಮಥುರಾಕ್ಕರ 
ಎಡೆಯಕ್ಕರ	ಅಂತರಾಕ್ಕರ
ಕಿರಿಯಕ್ಕರ	ಅಲ್ಪಾಕ್ಕರ

ಯಾವ ದೇಶದಲ್ಲಾದರೋ ಯಾವ ಭಾಷೆಯಲ್ಲಾದರೂ ಪದ್ಯರಚನೆಗೆ ಪೂರ್ವಯಾವಿಯಾಗಿ ಗೇಯ ರಚನೆ ಆಗಿರುತ್ತದೆ. ತೆಲುಗಿನಲ್ಲಿ ಸಹ ಹಾಗೆಯೇ ಇತ್ತು. ಪದ್ಯರಚನೆ ತೆಲುಗಿನಲ್ಲಿ ಶತಮಾನದಿಂದ ಇತ್ತೆಂದು ಶಾಸನ ಪದ್ಯಗಳಿಂದ ಗೋಚರವಾಗುತ್ತದೆ. ಪಂಡರಂಗನ ಅದ್ದಂಕಿ ಶಾಸನದಲ್ಲಿ (ಕ್ರಿ.ಶ 848) ತರುವೋಜ ಎಂಬ ತೆಲುಗು ಪದ್ಯವಿದೆ. ಯುದ್ಧಮಲ್ಲನ ಬೆಜವಾಡ ಶಾಸನದಲ್ಲಿ (10 ನೆಯ ಶತಮಾನದ ಆದಿಕಾಲ) ಐದು ಮಧ್ಯಾಕ್ಕರಗಳು ಇವೆ. ಆದಿಕವಿ ನನ್ನಯ ತೆಲುಗು ಭಾರತದಲ್ಲಿ ಕನ್ನಡ ಅಕ್ಕರಗಳನ್ನು ಅನುಕರಿಸಿದ್ದಾನೆ. ಆಧುನಿಕರಲ್ಲಿ ಕವಿಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣ ಅವರು ಈಚೆಗೆ ಈ ಛಂದಸ್ಸಿನಲ್ಲಿ ಬರೆಯುತ್ತಿದ್ದಾರೆ. ಕನ್ನಡದ ಬ್ರಹ್ಮ, ವಿಷ್ಣು, ರುದ್ರ ಗಣಗಳು ತೆಲುಗಿನಲ್ಲಿ ಸೂರ್ಯ, ಚಂದ್ರ, ಇಂದ್ರ ಎನಿಸಿಕೊಳ್ಳುತ್ತವೆ. ಕನ್ನಡದಲ್ಲಿ ಲಲಿತ, ಮಂದಾನಿಲ, ಉತ್ಸಾಹ ಎಂಬು ಮುಖ್ಯವಾಗಿ 3 ವಿಧವಾಗಿರುವ ರಗಳೆ, ತೆಲುಗಿನಲ್ಲಿ ಒಂಬತ್ತು ವಿಧವಾಗಿದೆ: ಹಯ ಪ್ರಚಾರ ರಗಳೆ, ತುರಗವಲ್ಗನ ರಗಳು, ವಿಜಯ ಮಂಗಳ ರಗಳೆ, ದ್ವಿರದಗತಿ ರಗಳೆ, ವಿಜಯಭದ್ರ ರಗಳೆ, ಮಧುರಗತಿ ರಗಳೆ, ಹರಿಗತಿ ರಗಳೆ, ಹರಿಣಗತಿ ರಗಳೆ, ವೃಷಭಗತಿ ರಗಳೆ - ಇವೇ ಆ ಒಂಬತ್ತು ರಗಳೆಗಳು. ಇವು ಯಕ್ಷಗಾನಗಳಲ್ಲಿ ಹೆಚ್ಚಾಗಿ ಬಳಕೆಯಾಗಿವೆ.

ಯತಿಯನ್ನು ತೆಲುಗಿನಲ್ಲಿ ಮಡಿ, ವಳಿ ಎಂದೂ ಕರೆಯುವುದುಂಟು. ಇದು ತಮಿಳಿನ ವಡು ಎಂಬ ಪದದಿಂದ ಬಂದಿರಬಹುದು. ಸಂಸ್ಕøತದಲ್ಲಿ ಇದನ್ನು ಶ್ಲೋಕದ ಪಾದಮಧ್ಯದಲ್ಲಿ ಎಲ್ಲಿಯೋ ಒಂದು ಕಡೆ ವಿಶ್ರಾಂತಿಗೋಸ್ಕರ ಉಪಯೋಗಿಸಿದ್ದಾರೆ. ತೆಲುಗಿನಲ್ಲಿ ಪದ್ಯಪಾದದ ಮೊದಲಿನ ಅಕ್ಷರಕ್ಕೂ ಆಯಾ ಪದ್ಯದಲ್ಲಿ ಹೇಳಿರುವ ಜಾಗದಲ್ಲಿ ಅಕ್ಷರ ಮೈತಿ ವಿಶ್ರಾಂತಿಗೋಸ್ಕರ ಏರ್ಪಾಡಾಗಿದೆ. ಯತಿ ಮೈತ್ರಿಗೋಸ್ಕರ ಅಕ್ಷರಗಳನ್ನು ಕೂಡಾ ನಿಗದಿ ಮಾಡಲಾಗಿದೆ. ಒಂದೊಂದು ಪದ್ಯದಲ್ಲಿ ಒಂದೊಂದು ಕಡೆ ಇಂಥ ಯತಿಸ್ಥಾನ ಗೊತ್ತಾಗಿದೆ. ಕವಿಜನಾಶ್ರಯದಲ್ಲಿ 10, ಕಾವ್ಯಾಲಂಕಾರ ಚೂಡಾಮಣಿಯಲ್ಲಿ 12, ಛಂದೋದರ್ಪಣದಲ್ಲಿ 24, ಅಪ್ಪಕವೀಯದಲ್ಲಿ 41 ಯತಿ ಭೇದಗಳನ್ನು ತೋರಿಸಲಾಗಿದೆ.

ಪದ್ಯಪಾದದಲ್ಲಿ ಮೊದಲನೆಯ ಅಕ್ಷರ ಯತಿ ಎಂದೂ ಎರಡನೇ ಅಕ್ಷರ ಪ್ರಾಸವೆಂದೂ ಸಂಕೇತವಿದೆ. ಶಬ್ದಾಲಂಕಾರವನ್ನು ಪೋಷಿಸುವುದಕ್ಕೆ ಸುಕರ, ದುಷ್ಕರ್, ದ್ವಿ, ತ್ರಿ, ಚತುಷ್ಪ್ರಾಸ, ಅನುಪ್ರಾಸ, ಅಂತ್ಯಪ್ರಾಸಗಳಾಗಿ ಪ್ರಾಸವನ್ನು ವಿಭಜನೆ ಮಾಡಿ ಅಪ್ಪಕವಿ ಹೇಳಿದ್ದಾನೆ. ಕವಿಗಳು ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸುವುದರಲ್ಲಿ ಈ ಪ್ರಾಸಗಳನ್ನು ಬಗೆಬಗೆಯಾಗಿ ಬಳಸಿದ್ದಾರೆ.

ತೆಲುಗಿನಲ್ಲಿ ಕವಿಜನಾಶ್ರಯಮು ಎಂಬ ಮೊತ್ತಮೊದಲನೆಯ ಛಂದಶ್ಶಾಸ್ತ್ರವನ್ನು ವೇಮುಲವಾಡ ಭೀಮಕವಿ ಬರೆದಿದ್ದಾನೆ. ಇವನು 14 ನೆಯ ಶತಮಾನದವನೆಂದು ಕಂದುಕೂರು ವೀರೇಶಲಿಂಗಮು ಪಂತುಲು ಕವಿಜೀವಿತಮುಲು ಎಂಬ ಈ ಗ್ರಂಥದಲ್ಲಿ ಹೇಳಿದ್ದಾರೆ. ಈ ಕವಿಗೆ ಶಾಪಾನುಗ್ರಹಶಕ್ತಿ ಇತ್ತೆಂದೂ ಒಂದು ರೀತಿಯ ಛಂಧಸ್ಸಿನ ಪದ್ಯವನ್ನು ಹೇಳಿ ಶಪಿಸಿದ ಮಾತ್ರದಿಂದಲೇ ಕಳಿಂಗ ಗಂಗು ಎಂಬ ಅರಸನಿಗೆ ರಾಜ್ಯಭ್ರಷ್ಟತ್ವ ಒದಗಿತೆಂದೂ ಇನ್ನೊಂದು ಛಂದಸ್ಸಿನ ಪದ್ಯದಿಂದ ಪೋತರಾಜನ ಪತ್ನಿಗೆ ಪತಿ ಪ್ರಾಪ್ತಿ ಆಯಿತೆಂದೂ ಒಂದು ಐತಿಹ್ಯ. ಹೀಗೆಯೇ ಆಡಿದ ಮುಸೂರಕವಿ ತಿಟ್ಟುಕವಿತೆಯಲ್ಲಿ (ಬಯ್ಯುವ ಕವನ) ಎತ್ತಿದಕೈ ಎಂದು ಪ್ರತೀತಿ.

ಚಿತ್ರಕವಿತೆ 16 ನೆಯ ಶತಮಾನದಿಮದ ಬಳಕೆಗೆ ಬಂದಿದೆ. ಇದು ಬಾಹ್ಯ ಶೋಭದಿಂದ ಕೂಡಿ ಶಬ್ದಾಲಂಕಾರಗಳಿಂದ ಕಿವಿಗೆ ಇಂಪಾಗಿರುತ್ತದೆ. ಇದರಲ್ಲಿ ಏಕಾಕ್ಷರಿ, ದ್ವ್ಯಕ್ಷರಿ, ತ್ರ್ಯಕ್ಷರಿ, ತಲಕಟ್ಟು, ಗುಡಿ, ಕೊಂಬು, ನಿರೋಷ್ಠ್ಯ, ಅಚಲಜಿಹ್ವಮು, ಅಸ್ಪರ್ಶಮು, ಅಕ್ಷರ ಗುಣಿತಮು, ಅನುಲೋಮ ವಿಲೋಮಗಳು, ಪಾದಪದ್ಯ ಭ್ರಮಕಗಳು, ಏಕಪದಿ, ದ್ವಿಪದಿ, ತ್ರಿಪದಿ, ಪಾದಗೋಪನದವಿವೆ. ಇವನ್ನು ಕವಿಗಳು ರಾಜಾಸ್ಥಾನಗಳಲ್ಲಿ ಸಭೆಗಳಲ್ಲಿ ಅಷ್ಟಾವಧಾನ ಶತಾವಧಾನ ಅಶುಕವಿತೆಗಳಲ್ಲಿ ಬಳಸಿ ಕೀರ್ತಿ ಗಳಿಸಿದ್ದಾರೆ. ಚಾಟುಪದ್ಯಗಳಲ್ಲಿ ಬೇಕಾದಷ್ಟು ಛಂದೋಪ್ರಕಾರಗಳನ್ನು ಕವಿಗಳು ಪರಂಪರೆಯಾಗಿ ಬಳಸಿಕೊಂಡು ಬಂದಿದ್ದಾರೆ. ಒಂದು ಛಂದಸ್ಸಿನಲ್ಲಿ ಒಂದು ಸಮಸ್ಯೆ ಕೊಟ್ಟು ಪದ್ಯದಲ್ಲಿ ಪೂರೈಸಿ ಎಂದು ಕೇಳುವ ಸಮಸ್ಯಾಪೂರಣ ಕವಿಗಳಿಗೆ ಒಂದು ಕಠಿನವಾದ ಪರೀಕ್ಷೆ. ಬಂಧ ಕವಿತೆ ಎಂಬುದು ಮತ್ತೊಂದು ಛಂದೋರೀತಿ. ಗೋಮೂತ್ರಿಕಾ, ಛತ್ರ, ಗುಚ್ಛ, ನಾಗ, ಕಂಕಣ, ಮರ್ದಲ, ಖಡ್ಗ, ಪದ್ಮ, ಸರ್ವತೋಭದ್ರ, ರಥ, ಪುಷ್ಪಮಾಲಿಕಾ, ಸರ್ಪ _ ಈ ಆಕಾರಗಳ ಮನೆಗಳಲ್ಲಿ (ಹಾಸುಗಳು) ಪದ್ಯಾಕ್ಷರಗಳನ್ನು ಇರಿಸಿ ರಚನೆ ಮಾಡಿರುವುದುಂಟು. ಇವುಗಳಲ್ಲಿ ಕವಿ ತನ್ನ ಹೆಸರನ್ನು ಸೇರಿಸಿ ರಚನೆ ಮಾಡುವುದೂ ಉಂಟು. ಒಂದು ದೊಡ್ಡ ಪದ್ಯದೊಳಗೆ ಚಿಕ್ಕ ಪದ್ಯವೊಂದನ್ನು ಸೇರಿಸಿ ರಚನೆ ಮಾಡುವ ಗರ್ಭಕವಿತೆ ಎಂಬುದು ಮತ್ತೊಂದು ಚಮತ್ಕಾರ.

ನಿರೋಷ್ಠ್ಯ ರಚನೆಗೆ ಒಂದು ಉದಾಹರಣೆ:

ಕಂದ|| ನರಹರ್ಯಕ್ಷ ದಯಾಕರ

	ಕರಿ ರಕ್ಷಣ ಚಕ್ರ ಹಸ್ತ ಕಾಂಚನ ಚೇಲಾ
	ಗರುಡ ತುರಂಗ ಜನಾರ್ದನ 
ಖರದೈತ್ಯ ನಿಕೃಂತನ ಹರಿಕಂಜದಳಾಕ್ಷಾ ---- ಅಪ್ಪಕವಿ

ಪ್ರತಿಪಾದವನ್ನು ಹಿಂದಿನಿಂದಲೂ ಓದಿದರೂ ಅದೇ ರೀತಿ ಪಾದಕ್ರಮ ಬರುವ ಹಾಗೆ ರಚಿಸುವ ಪಾದಭ್ರಮಕಮು ಎಂಬ ರಚನೆಗೆ ಒಂದು ಉದಾಹರಣೆ:

ಕಂದ|| ವೀರವರ ಕೈರವರ ವೀ
	ಸಾರಸ ಭರ ಸೌಧಯೂಧ ಸೌರಭ ಸರಸಾ
	ವಾರಣ ರಥ್ಯರಣ ರವಾ
	ತಾರ ಭವನ ತಾನಮಾನತಾನವ ಭರತಾ|

ದಂಡಕ, ರಗಳೆ, ಷಟ್ಪದೀ ರಚನೆಗಳು ತೆಲುಗಿನಲ್ಲಿ ಉಂಟು. ಈಗಿನ ಕಾಲದಲ್ಲಿ ಇಂಗ್ಲೀಷಿನ ವಿದ್ಯಾಭ್ಯಾಸ ಪ್ರಭಾವದಿಂದ ಕೀಟ್ಸ್ ಮುಂತಾದ ಪಾಶ್ಚಾತ್ಯ ಕವಿಗಳನ್ನನುಸರಿಸಿ ಭಾವಗೀತೆಗಳನ್ನೂ ಖಂಡ ಕಾವ್ಯಗಳನ್ನೂ ಬರೆಯುತ್ತಿದ್ದಾರೆ. ಇದರಲ್ಲಿ ಪ್ರಾಚೀನ ಛಂದೋನಿಯಮಗಳು ಇಲ್ಲ. ಸ್ಪಷ್ಟ ನಿಯತ ನಿಬಂಧವಿಲ್ಲದೆ ಪ್ರಾಸ, ಲಯಗಳನ್ನಿಟ್ಟುಕೊಂಡು ಪದ್ಯ - ಗೇಯಗಳನ್ನು ಕೆಲವರು ರಚಿಸುತ್ತಿದ್ದಾರೆ. ಪ್ರಾಚೀನ ಛಂದಸ್ಸಿನಲ್ಲಿ ಕಾವ್ಯಗಳನ್ನು ಬರೆಯುವವರೂ ಇದ್ದಾರೆ.			(ಕೆ.ಎಸ್.ಯು.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ